ಕುಚೇಲ  

  ಶ್ರೀಕೃಷ್ಣನ ಬಾಲ್ಯದ ಸಹಪಾಠಿ; ಮೆಚ್ಚಿನ ಸ್ನೇಹಿತ. ಈತನ ನಿಜವಾದ ಹೆಸರು ಸುದಾಮ. ಗುರು ಸಾಂದೀಪರಲ್ಲಿ ಇಬ್ಬರೂ ವಿದ್ಯಾಭ್ಯಾಸ ಮಾಡಿದರು.

 ವಿದ್ಯಾಭ್ಯಾಸ ಪೂರೈಸಿದ ಮೇಲೆ ಶ್ರೀಕೃಷ್ಣ ಮಧುರೆಗೆ ಹಿಂತಿರುಗಿ ತನ್ನ ರಾಜಕಾರ್ಯಗಳಲ್ಲಿ ಮಗ್ನನಾದ; ಸುದಾಮ ತನ್ನ ಅಗ್ರಹಾರಕ್ಕೆ ಹಿಂತಿರುಗಿ ವೇದಕರ್ಮಗಳಲ್ಲಿ ನಿರತನಾದ. ಕಾಲಕ್ರಮದಲ್ಲೀತನಿಗೆ ಮದುವೆಯಾಗಿ ಮನೆ ತುಂಬ ಮಕ್ಕಳಾದುವು. ವೇದವೇದಾಂತಪಾರಂಗತನಾದರೂ ಕುಚೇಲನ ಬಡತನ ಮಾತ್ರ ಹಾಗೇ ಉಳಿದು ಬಂತು. ಬಡತನವಿದ್ದರೂ ಇವನಿಗೆ ಬೇಡಿ ಗೊತ್ತಿರಲಿಲ್ಲ. ಬಂದದ್ದರಲ್ಲೇ ಇವನಿಗೆ ಪರಮತೃಪ್ತಿ, ಉಡಲು ಬಟ್ಟೆ ಇಲ್ಲ, ತಿನ್ನಲು ಗಂಜಿ ಇಲ್ಲ, ತಿನ್ನಲು ಗಂಜಿ ಇಲ್ಲ. ಹೀಗಾಗಿ ಹಸಿವಿನಿಂದ ಬಳಲಿ, ಹರುಕು ಚಿಂದಿಗಳನ್ನು ಧರಿಸಿ ಕಾಲಯಾಪನೆ ಮಾಡುತ್ತಿದ್ದುದರಿಂದ ಜನ ಸುದಾಮನಿಗೆ ಕುಚೇಲ (ಕೆಟ್ಟ ಬಟ್ಟಯವ) ಎಂಬ ಅಡ್ಡಹೆಸರಿಟ್ಟರು.

 ದೈವವಶಾತ್ ಕುಚೇಲನಿಗೆ ಸಿಕ್ಕ ಮಡದಿ ಪುಣ್ಯವಂತೆ. ಗಂಡನ ಮಾರ್ಗದಲ್ಲಿ ಸಹಾಯಕಾರಿ, ಗಂಡ ತಂದುದನ್ನು ಒಪ್ಪ ಓರಣವಾಗಿ ಬಳಸಿ, ಪತಿಸುತರ ಪೋಷಣೆಗೇ ವಿನಿಯೋಗಿಸಿ, ತಾನು ಎಷ್ಟೋ ವೇಳೆ ಉಪವಾಸವಿರುತ್ತಿದ್ದಳು. ಅದರಿಂದ ಜನ ಅವಳನ್ನು ಕ್ಷುತ್‍ಕ್ಷಾಮೆ ಎಂದು ಕರೆಯುತ್ತಿದ್ದರು.

 ಆಕೆ ಒಂದು ದಿನ ತನ್ನ ಪತಿಗೆ 'ನೀವೊ ಶ್ರೀಕೃಷ್ಣನೂ ಪರಮ ಸ್ನೇಹಿತರು. ಆತನೋ ಕರುಣಿ, ದಯಾಮಯ, ನೀವು ಆತನಲ್ಲಿಗೆ ಹೋದರೆ ಆತ ನಿಮಗೆ ಸಹಾಯ ಮಾಡಲಾರನೆ. ಸಮುದ್ರದೊಡನೆ ನೆಂಟು, ಉಪ್ಪಿಗೆ ಬಡತನವೆ? ಎಂದು ಕೇಳಿದಳು.

 ಈ ಮಾತು ಕೇಳಿ ಕುಚೇಲನಿಗೆ ತುಂಬ ಸಂತೋಷವಾಯಿತು. 'ಅವುದಾಗಲಿ ನೆಪಂ, ಫಲದಾಯಕಂ ತಪಂ' ಎಂಬಂತೆ ಶ್ರೀಕೃಷ್ಣನ ದರ್ಶನಭಾಗ್ಯ ಲಭಿಸುತ್ತದೆಂದು ದ್ವಾರಕಿಗೆ ಹೊರಟ, ಬರಿಗೈಯಲ್ಲಿ ಹೋಗುವುದು ಬೇಡೆಂದು ಮಡದಿ ತಂದ ಅವಲಕ್ಕಿಯನ್ನು ತನ್ನ ಚಿಂದಿಯಲ್ಲಿ ಕೊಂಡೊಯ್ದ.

 ಭಗವಂತನಾದ ಶ್ರೀಕೃಷ್ಣನನ್ನು ಸ್ತೋತ್ರಮಾಡುವ ಮಾತುಗಳೆ ನಿಜವಾದ ಮಾತುಗಳು. ಆತನ ಸೇವೆ ಮಾಡುವ ಕೈಗಳೆ ಕೈಗಳು, ಆತನನ್ನು ಧ್ಯಾನಿಸುವ ಮನಸ್ಸೆ ಮನಸ್ಸು, ಆತನ ಪುಣ್ಯಕಥೆಯನ್ನು ಕೇಳುವ ಕಿವಿಗಳೆ ಕಿವಿಗಳು, ಆತನಿಗೆ ನಮಸ್ಕರಿಸುವ ತಲೆಯೆ ತಲೆ. ಆತನನ್ನು ನೋಡುವ ಕಣ್ಣೇ ಕಣ್ಣು! ಆದರೆ ಅರಮನೆಯಲ್ಲಿರುವ ಆತನನ್ನು ಕಾಣುವ ಬಗೆ ಹೇಗೆ? -ಎಂದು ಚಿಂತಿಸುತ್ತ ದ್ವಾರಕೆಯನ್ನು ಸೇರಿ ಶ್ರೀಕೃಷ್ಣನ ಅರಮನೆಯ ಒಳಗೆ ಬಂದು ತನ್ನ ಆಗಮನದ ವಾರ್ತೆಯನ್ನು ತಿಳಿಸಿದ.

 ಕುಚೇಲನ ಆಗಮನದ ವಾರ್ತೆ ತಿಳಿದ ಕೂಡಲೇ ಶ್ರೀಕೃಷ್ಣ ಅತಿ ಆದರದಿಂದ ಅವನನ್ನು ಇದಿರ್ಗೊಂಡು ತನ್ನ ಅಂತಃಪುರಕ್ಕೆ ಕರೆದೊಯ್ದ, ಸತ್ಕಾರ ಮಾಡಿದ ಕುಶಲಕ್ಷೇಮ ವಿಚಾರಿಸಿದ. ವಿನೋದಕ್ಕಾಗಿ ಮನೆಯಿಂದ ನನಗೇನು ತಂದಿರುವೆ? ಎಂದು ವಿಚಾರಿಸಿದ.

 ಬಡ ಕುಚೇಲನಿಗೆ ತಂದಿರುವ ಅವಲಕ್ಕಿಯನ್ನು ತೋರಿಸಲು ನಾಚಿಕೆ. ಆದರ ಕೃಷ್ಣ ಬಿಡುವನೆ! ಕಂಕುಳಲ್ಲಿರುವ ಆ ಪುಟ್ಟ ಗಂಟೇನು-ಎನ್ನುತ್ತ ಅದನ್ನು ಸೆಳೆದು ಓಹೋ, ನನಗೆ ಪ್ರಿಯವಾದ ಅವಲಕ್ಕಿ ಎಂದು ಅದರಲ್ಲಿ ಒಂದು ಹಿಡಿಮುಕ್ಕಿದ. ಎರಡನೆಯ ಹಿಡಿಗೆ ಕೈಹಾಕಿದ ಕೂಡಲೇ ರುಕ್ಮಿಣಿ ಆತನ ಕೈಹಿಡಿದು 'ಸ್ವಾಮಿ, ನೀನು ತಿಂದ ಒಂದು ಹಿಡಿ ಈತನ ಇಹ ಪರಕಳೆರಡರ ಸುಖಕ್ಕೊ ಸಾಕಾಗಿದೆ. ಸಾಕು ನಿಲ್ಲಿಸು' ಎಂದು ಆತನನ್ನು ತಡೆದಳು.

 ಕುಚೇಲ ಕೆಲವು ದಿನಗಳವರೆಗೆ ಸಂತೋಷದಿಂದ ಕೃಷ್ಣನೊಡನಿದ್ದು, ಅನಂತರ ಅವನಿಂದ ಬೀಳ್ಕೊಂಡು ತನ್ನ ಆಗ್ರಹಾರಕ್ಕೆ ಹೊರಟ. ಸರ್ವಜ್ಞನಾದ ಶ್ರೀಕೃಷ್ಣ ಕುಚೇಲನ ಗೃಹಕೃತ್ಯಗಳನ್ನು ವಿಚಾರಿಸಲಿಲ್ಲ. ಪರಯಾಚನಾವಿಮುಖನಾದ ಕುಚೇಲನೂ ತನ್ನ ದುಃಸ್ಥಿತಿಯನ್ನು ಹೇಳಿಕೊಳ್ಳಲಿಲ್ಲ. ಅದರ ಬದಲು ನಿಶ್ಚಿಂತನಾಗಿ ಮನೆಯ ದಾರಿ ಹಿಡಿದ. ಹಾಗೆ ಬರುತ್ತ ತನ್ನ ಮನಸ್ಸಿನಲ್ಲಿ ಆಹಾ, ಲಕ್ಷ್ಮೀಪತಿಯಾದ ಶ್ರೀಕೃಷ್ಣ ದಟ್ಟದರಿದ್ರನಾದ ನನ್ನನ್ನು ಆಲಂಗಿಸಿದನಲ್ಲಾ! ನನ್ನನ್ನು ತನ್ನ ಮಂಚದ ಮೇಲೆ ಕೂಡಿಸಿಕೊಂಡು ತನ್ನ ಪಟ್ಟದ ರಾಣಿಯಿಂದ ಗಾಳಿ ಹಾಕಿಸಿದನಲ್ಲಾ! ದೇವದೇವನಾದ ಆತ ನನ್ನ ಕಾಲನ್ನು ತೊಳೆದು ನಾನೇ ದೇವರೇನೋ ಎಂಬಂತೆ ಉಪಚರಿಸಿದನಲ್ಲಾ! ಸರ್ವಾಂತರ್ಯಾಮಿಯಾದ ಆತನಿಗೆ ನನ್ನ ಮನಸ್ಸಿನ ಆಸೆ ಗೊತ್ತಿರಬೇಕು. ಆದರೂ ಆತ ನನಗೆ ಧನವನ್ನೇನೂ ಕೊಡದಿದ್ದುದನ್ನು ನೋಡಿದರೆ ನನ್ನ ಉದ್ದಾರಕ್ಕಾಗಿಯೇ ಆತ ಹಾಗೆ ಮಾಡಿರಬೇಕು. ಭಾಗ್ಯವಂತನಾದರೆ ಭಗವಂತ ಮರೆತು ಹೋಗುತ್ತಾನೆ'- ಎಂದುಕೊಳ್ಳುತ್ತ ತನ್ನ ಅಗ್ರಹಾರವನ್ನು ಸಮೀಪಿಸಿದ. ಅದನ್ನು ಕಂಡು ಅಚ್ಚರಿಪಟ್ಟ!

 ಅಷ್ಟರಲ್ಲಿ ಕೃಷ್ಣನ ಅಪ್ಪಣೆಯಂತೆ ವಿಶ್ವಕರ್ಮ ಆ ಅಗ್ರಹಾರವನ್ನೆಲ್ಲ ದಿವ್ಯನಗರಿಯಾಗಿ ಮಾರ್ಪಡಿಸಿದ್ದ. ಕುಚೇಲನ ಮನೆಯ ಗುರುತೇ ಸಿರಲಿಲ್ಲ. ಅಂಥ ಭವ್ಯ ಭವನವೊಂದು ಅವನದಾಗಿತ್ತು. ಆಗ ಕುಚೇಲನ ಮಡದಿ ದಿವ್ಯವಸ್ತ್ರಾಭರಣ ಭೂಪಿತೆಯಾಗಿ ಬಂದು ಅವನನ್ನು ಇದಿರ್ಗೊಂಡು ಒಳಕ್ಕೆ ಕರೆದೊಯ್ದಳು.

 ಆಗ ಕುಚೇಲ ಇದೆಲ್ಲವನ್ನೂ ಕಂಡು 'ಆಹಾ! ಶ್ರೀಕೃಷ್ಣ! ನಾನು ಕೇಳದೆಯೇ ನೀನಿಷ್ಟು ಐಶ್ಚರ್ಯವನ್ನಿತ್ತೆ. ಅರೆಕಾಸಿನ ಭಕ್ತಿಗೆ ಅರಮನೆಯನ್ನೇ ಕೊಡುವ ಉದಾರಿ ನೀನು. ಹಿಡಿ ಅವಲಕ್ಕಿಗೆ ಹಿರಿಹಿರಿ ಹಿಗ್ಗಿ ಈ ಒಡೆತನವಿತ್ತೆಯಲ್ಲ! ನಾನು ಇದನ್ನು ಕಟ್ಟಿಕೊಂಡು ಏನು ಮಾಡಲಿ? ಈ ಭೋಗಭಾಗ್ಯಗಳಿಂದ ನನಗೆ ಅಹಂಕಾರ ಮೂಡದಂತೆ ನನ್ನನ್ನು ಅನುಗ್ರಹಿಸು. ನಿನ್ನ ಮೇಲಿನ ಭಕ್ತಿ ನನ್ನಲ್ಲಿ ನಿರಂತರವಾಗಿರಲಿ' ಎಂದು ಭಗವಂತನನ್ನು ಬೇಡಿದ.

 ಜ್ಞಾನಿಯಾದ ಆತ ತನಗೆ ಮಹದೈಶ್ವರ್ಯ ಬಂದರೂ ಅವಿವೇಕಿಯಾಗಲಿಲ್ಲ. ಸಕಲ; ಭೋಗಭಾಗ್ಯಗಳ ಮಧ್ಯದಲ್ಲಿಯೂ ಆ ಬ್ರಹ್ಮಜ್ಞಾನಿ ತಾವರೆ ಎಲೆಯ ಮೇಲಿನ ಜಲಬಿಂದುವಿನಂತೆ ಪರಮಾತ್ಮನ ಧ್ಯಾನದಲ್ಲೇ ಮಗ್ನನಾಗಿ ಸಂತೋಷದಿಂದ ಜೀವಿಸಿದ.

 ಕುಚೇಲೋಪಾಖ್ಯಾನ ಬಹು ಹಿಂದಿನಿಂದಲೂ ಕವಿಗಳಿಗೆ, ಕಥಾ ಕಾಲಕ್ಷೇಪ ಮಾಡುವವರಿಗೆ ಬಹು ಪ್ರಿಯವಾದ ವಸ್ತುವಾಗಿದೆ.            

(ಪಿ.ವಿ.ಸಿ.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ